ನಯ್ಯರ್, ಪ್ಯಾರೇಲಾಲ್ -
ಬಾಬೂ ಪ್ಯಾರೇಲಾಲ್ ಎಂದು ಪ್ರಸಿದ್ಧರಾಗಿರುವ ಇವರು ನಿಷ್ಠಾವಂತ ಗಾಂಧೀವಾದಿ, ಸ್ವಾತಂತ್ರ್ಯ ಹೋರಾಟಗಾರ, ಪತ್ರಿಕೋದ್ಯಮಿ ಹಾಗೂ ಗಾಂಧೀ ಸಾಹಿತ್ಯ ಲೇಖಕ. 1899ರಲ್ಲಿ ದೆಹಲಿಯಲ್ಲಿ ಜನಿಸಿದರು. ಇವರ ಪೂರ್ವಿಕರು ಈಗ ಪಾಕಿಸ್ತಾನದಲ್ಲಿರುವ ಕುಂಜೋಗುಜ್ರಾತಿನಿಂದ ಬಂದವರು. ತಂದೆ ಸರ್ಕಾರಿ ಅಧಿಕಾರಿ; ಅಧಿಕ ಅಸಿಸ್ಟೆಂಟ್ ಕಮಿಷನರಾಗಿದ್ದರು. ಪ್ಯಾರೇಲಾಲರು ಲಾಹೋರಿನ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಪದವೀಧರರಾಗಿ ಅನಂತರ ಅದೇ ಕಾಲೇಜಿನಲ್ಲಿ ಎಂ.ಎ. ತರಗತಿ ಸೇರಿದರು. ಪರೀಕ್ಷೆಗೆ ಆರು ತಿಂಗಳುಗಳಿದ್ದಾಗ ಇವರು ಕಾಲೇಜಿನಿಂದ ಹೊರಬಂದು ಅಸಹಕಾರ ಚಳವಳಿಯಲ್ಲಿ ದುಮುಕಿದರು (1920). ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಇವರು ಹಲವು ಸಲ ಜೈಲುವಾಸವನ್ನನುಭವಿಸಿದರು. ಮಹಾತ್ಮ ಗಾಂಧಿಯವರ ನಿಕಟಾನುವರ್ತಿಯಾಗಿದ್ದ ಇವರು ಬಹಳ ಕಾಲ ಅವರ ಆಪ್ತಕಾರ್ಯದರ್ಶಿಯಾಗಿದ್ದರು. ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿಗೆ ಇವರು ಗಾಂಧಿಯವರೊಡನೆ ಹೋಗಿದ್ದರು (1930). ಅವರೊಂದಿಗೆ ಬರ್ಮ ಹಾಗೂ ಸಿಂಹಳಗಳಿಗೂ (ಶ್ರೀಲಂಕಾ) ಭೇಟಿ ನೀಡಿದ್ದರು. 1946ರಲ್ಲಿ ಹಿಂದೂ-ಮುಸ್ಲಿಂ ಗಲಭೆಗಳು ಸಂಭವಿಸಿದಾಗ ಗಾಂಧೀಜಿಯವರೊಡನೆ ಬಂಗಾಳ ಮತ್ತು ಇತರ ಹಲವು ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡರು. ನವಾಖಾಲಿಯಲ್ಲಿ ಹಿಂದೂ ಮುಸ್ಲಿಂ ಸೌಹಾರ್ದ ಸ್ಥಾಪನೆಗಾಗಿ ಬಹಳ ಶ್ರಮಿಸಿದರು. ಗಡಿನಾಡಿನ ಗಾಂಧಿ ಖಾನ್ ಅಬ್ದಲ್ ಗಫಾರ್ ಖಾನರನ್ನು ಭೇಟಿ ಮಾಡಲು 1965ರಲ್ಲಿ ಇವರು ಕಾಬೂಲಿಗೆ ಹೋಗಿದ್ದರು. ಅಹಿಂಸೆಯಿಂದಲೇ ದೇಶ ಸ್ವಾತಂತ್ರ್ಯ ಗಳಿಸಬಹುದೆಂಬುದು ಇವರಿಗೆ ಮನವರಿಕೆಯಾಗಿತ್ತು. ಸ್ವಾತಂತ್ರ್ಯಕ್ಕಾಗಿ ಆತ್ಮಬಲಿದಾನ ಮಾಡಿದ ಕ್ರಾಂತಿವಾದಿಗಳಲ್ಲಿ ಇವರಿಗೆ ಅಭಿಮಾನವಿದ್ದರೂ ಅವರು ಅಹಿಂಸಾ ಮಾರ್ಗದಿಂದ ನಡೆದಿದ್ದರೆ ಅವರ ಬಾಳುಗಳು ದೇಶಾಭ್ಯುದಯಕ್ಕಾಗಿ ಉಳಿದುಕೊಳ್ಳುತಿದ್ದುವೆಂಬುದು ಇವರ ಭಾವನೆ. ಸಣ್ಣ ಕೈಗಾರಿಕೆಗಳ ಅಭ್ಯುದಯ, ಕೈಗಾರಿಕೆಗಳ ವಿಕೇಂದ್ರೀಕರಣ, ಗ್ರಾಮೀಣ ಆರ್ಥಿಕತೆಯ ಪುನರುತ್ಥಾನ ಮುಂತಾದ ಗಾಂಧೀ ಸೂತ್ರಗಳಲ್ಲಿ ಇವರಿಗೆ ನಂಬಿಕೆ. ಇಂಗ್ಲಿಷರ ಅನೇಕ ಸದ್ಗುಣಗಳು ಇವರಿಗೆ ಮೆಚ್ಚುಗೆಯಿತ್ತು. ಬ್ರಿಟಿಷ್ ಸಾಮ್ರಾಜ್ಯವಾದವನ್ನು ಇವರು ವಿರೋಧಿಸಿದರೂ ಬ್ರಿಟಿಷರಲ್ಲಿ ವೈಯಕ್ತಿಕ ದ್ವೇಷವನ್ನು ಇವರು ಎಂದಿಗೂ ಸಾಧಿಸಿದವರಲ್ಲ.

ಪ್ಯಾರೇಲಾಲರು ಪ್ರಥಮ ದರ್ಜೆಯ ಪತ್ರಿಕೋದ್ಯಮಿ. ಗಾಂಧಿಯವರ ಯಂಗ್ ಇಂಡಿಯ ಪತ್ರಿಕೆಗೆ ಇವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಹರಿಜನ ವಾರಪತ್ರಿಕೆಗೆ ಇವರು ಸ್ವಲ್ಪ ಕಾಲ ಸಂಪಾದಕರಾಗಿದ್ದರು (1946-48). ಇವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ದಿ ಎಪಿಕ್ ಫಾಸ್ಟ್, ಸ್ಟೇಟಸ್ ಆಫ್ ಇಂಡಿಯನ್ ಪ್ರಿನ್ಸಸ್, ಎ ಪಿಲ್ಗ್ರಿಮೇಜ್ ಫಾರ್ ಪೀಸ್, ಎ ನೇಷನ್ ಬಿಲ್ಡರ್ ಅಟ್ ವರ್ಕ್, ಗಾಂಧಿಯನ್ ಟೆಕ್ನಿಕ್ಸ್ ಇನ್ ದಿ ಮಾಡರ್ನ್ ವಲ್ರ್ಡ್, ಟುವಡ್ರ್ಸ್ ನ್ಯೂ ಹೊರೈಜûನ್ಸ್, ಮಹಾತ್ಮ ಗಾಂಧಿ-ದಿ ಲಾಸ್ಟ್ ಫೇಸ್, ಮಹಾತ್ಮ ಗಾಂಧಿ-ದಿ ಅರ್ಲಿ ಫೇಸ್, ಇವು ಪ್ಯಾರೇಲಾಲರು ರಚಿಸಿದ ಗ್ರಂಥಗಳಲ್ಲಿ ಕೆಲವು. ಯಂಗ್ ಇಂಡಿಯ ಮತ್ತು ಹರಿಜನ ಪತ್ರಿಕೆಗಳಲ್ಲಿ ಬರೆದ ಲೇಖನಗಳು, ಹಾಗೂ ಗಾಂಧೀಜಿಯವರು ಬದುಕಿದ್ದಾಗ ಮತ್ತು ಅನಂತರ ಅವರ ವಿಚಾರವಾಗಿ ಪ್ಯಾರೇಲಾಲರು ಬರೆದ ಲೇಖನಗಳು ಮತ್ತು ಗ್ರಂಥಗಳು-ಇವುಗಳಿಂದ ಇವರು ಯಥಾವತ್ತಾದ ಮತ್ತು ಸಪ್ರಮಾಣ ವೃತ್ತಾಂತಕಾರರೆಂದೂ ಗಾಂಧೀಜಿ ಯವರ ಜೀವನ ಹಾಗೂ ತತ್ತ್ವಗಳ ವ್ಯಾಖ್ಯಾನಕಾರರೆಂದೂ ಪ್ರಸಿದ್ಧರಾಗಿದ್ದಾರೆ. ಮಹಾತ್ಮಾ ಗಾಂಧಿ-ದಿ ಲಾಸ್ಟ್ ಫೇಸ್ ಮತ್ತು ಮಹಾತ್ಮ ಗಾಂಧಿ-ದಿ ಅರ್ಲಿ ಫೇಸ್, ಇವು ಗಾಂಧೀಜಿಯವರ ಆತ್ಮಕಥೆಗೆ ಪೂರಕ ಗ್ರಂಥಗಳಾಗಿವೆ. ಗಾಂಧೀಜಿಯವರ ಬಗ್ಗೆ ಪ್ರಮಾಣ ಭೂತ ಮಾಹಿತಿಯನ್ನೊದಗಿಸುವ ಕೃತಿಗಳಲ್ಲಿ ಇವೂ ಸೇರಿವೆ. ಸಾಹಿತ್ಯದೃಷ್ಟಿಯಿಂದಲೂ ಪ್ಯಾರೇಲಾಲರ ಕೃತಿಗಳು ಉತ್ತಮ ಮಟ್ಟದವಾಗಿವೆ. ಗಾಂಧಿಯವರಲ್ಲದೆ ಮಹಾದೇವ ದೇಸಾಯಿ, ಕಸ್ತೂರ ಬಾ ಗಾಂಧಿ ಮತ್ತು ದೇವದಾಸ್ ಗಾಂಧಿಯವರಿಗೂ ಪ್ಯಾರೇಲಾಲ್ ಅವರು ನಿಕಟಾನುವರ್ತಿಯಾಗಿದ್ದರು. ಪ್ಯಾರೇಲಾಲರು 1950ರಲ್ಲಿ ಬೇಲಾ ಅವರನ್ನು ವಿವಾಹವಾದರು. ಈಕೆ ಬಂಗಾಲದವರು.

ಪ್ಯಾರೇಲಾಲರು ಅತ್ಯಂತ ಸರಳ ಜೀವಿ, ನಿಗರ್ವಿ. ಸ್ವಪ್ರತಿಷ್ಠೆಯನ್ನು ಬೆಳೆಸಿಕೊಳ್ಳಲು ಇವರು ಎಂದೂ ಯತ್ನಿಸಿದವರಲ್ಲ. ಇವರು ಅಧಿಕಾರವ್ಯಾಮೋಹಕ್ಕೆ ಒಳಗಾಗಲಿಲ್ಲ.								(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ